ತೆನಾಲಿ ರಾಮಕೃಷ್ಣ -
ಸು. 1520. ವಿಜಯನಗರದ ಸಮ್ರಾಟ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಅಷ್ಟದಿಗ್ಗಜಗಳೆಂದು ಪ್ರಸಿದ್ಧಿ ಪಡೆದ ಎಂಟು ಜನ ಕವಿಗಳಲ್ಲಿ ಒಬ್ಬನೆಂದು ಪ್ರತೀತಿ. ರಾಮಕೃಷ್ಣನ ಹೆಸರಿಗೆ ಅಂಟಿಬಂದಿರುವ ತೆನಾಲಿ ಎಂಬುದು ಗುಂಟೂರು ಜಿಲ್ಲೆಯಲ್ಲಿನ ಒಂದು ದೊಡ್ಡ ಪಟ್ಟಣ. ಈತ ವಿಕಟಕವಿ ಎಂದು ಪ್ರಸಿದ್ಧನಾಗಿದ್ದಾನೆ. ಈತನ ಲೋಕೋಕ್ತಿಗಳು, ಚಾಟು ಪದ್ಯಗಳು, ಕಥೆಗಳು ಆಂಧ್ರ ದೇಶದಲ್ಲಲ್ಲದೆ ಕರ್ನಾಟಕದಲ್ಲೂ ಪ್ರಸಿದ್ಧಿಹೊಂದಿವೆ. ಈತನನ್ನು ಕುರಿತ ಕಥೆಗಳು ಅನೇಕ ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿವೆ. ಕಥೆಗಳ ಈ ರಾಮಕೃಷ್ಣನಿಗೂ ಕವಿ ರಾಮಕೃಷ್ಣನಿಗೂ ಸಂಬಂಧವಿಲ್ಲವೆಂದು ವಿಮರ್ಶಕರ ಅಭಿಪ್ರಾಯ.

	ಕವಿ ರಾಮಕೃಷ್ಣ ಶೈವನಾಗಿದ್ದಾಗ ರಾಮಲಿಂಗನೆಂಬ ಹೆಸರಿನಲ್ಲಿ ಉದ್ಭಟಾರಾಧ್ಯಚರಿತ್ರೆ ಎಂಬ ಶೈವಕಾವ್ಯವನ್ನೂ ವೈಷ್ಣವನಾಗಿದ್ದಾಗ ರಾಮಕೃಷ್ಣನೆಂಬ ಹೆಸರಿನಿಂದ ಪಾಂಡುರಂಗಮಾಹಾತ್ಮ್ಯ ಎಂಬ ವೈಷ್ಣವ ಪ್ರೌಢಕಾವ್ಯವನ್ನೂ ರಚಿಸಿದ್ದಾನೆ. ಎರಡನೆಯ ಗ್ರಂಥ ತೆಲುಗಿನ ಸುಪ್ರಸಿದ್ಧ ಪಂಚಕಾವ್ಯಗಳಲ್ಲಿ ಒಂದಾಗಿದೆ. ಇದು ಪ್ರೌಢತೆಗೂ ಪದಗುಂಫನಕ್ಕೂ ಪ್ರಸಿದ್ಧಿ ಪಡೆದ ಕಾವ್ಯ. ಗಂಭೀರಭಾವ, ಪ್ರಕಟಣೆ, ರಸಪಾತ್ರಪೋಷಣೆ ಈತನಕಾವ್ಯಗಳ ಮುಖ್ಯ ಗುಣ. ಇದಕ್ಕೆ ನಿಗಮಶರ್ಮೋಪಾಖ್ಯಾನ, ಸುಶೀಲ ಕಥೆ ನಿದರ್ಶನಗಳು. ಈತನಿಗೆ ಕನ್ನಡ ಕಾವ್ಯಗಳ ಪರಿಚಯವಿತ್ತು ಎಂದು ತೋರುತ್ತದೆ. ಮಲ್ಲಿಯಲ ಪೆಲ್ಲು ಕನ್ನಡ ಕವಿತಾನಂಬುನುಂ ಬೋಲೆ ಷಟ್ಟದ ವೃತ್ತ ವಿಲಾಸ ಭಾಸುರಂಭೈ ಎಂಬುದಾಗಿ ಈತನೆ ಒಂದೆಡೆ ಹೇಳಿದ್ದಾನೆ. ಕನ್ನಡದ ಷಟ್ಪದೀ, ವೃತ್ತಗಳೆಂದರೆ ತನಗೆ ಪ್ರೀತಿಯೆಂದೂ ಅವು ಮಲ್ಲಿಗೆ ಹೂವುಗಳಿಗೆ ಸಮವೆಂದೂ ಈ ಮಾತಿನ ಅರ್ಥ ಇದರಲ್ಲಿ ಶ್ಲೇಷೆಯೂ ಉಂಟು.

	ಕಥೆಯ ರಾಮಕೃಷ್ಣ ಚಾಟುಪದ್ಯಗಳಲ್ಲಿಯೂ ಸಮಸ್ಯಾಪೂರ್ಣ ಪದ್ಯಗಳಲ್ಲಿಯೂ ನೈಪುಣ್ಯವನ್ನು ತೋರಿದ್ದಾನೆ. ಉದಾಹರಣೆ ಒಂದೆರಡು ಸಂದರ್ಭಗಳನ್ನು ನೋಡಬಹುದು.

	ಕೃಷ್ಣದೇವರಾಯನ ಆಸ್ಥಾನದಲ್ಲಿ ರಾಮಕೃಷ್ಣ ಇತರ ಕವಿಗಳೊಡನೆ ಕುಳಿತಿರುವಾಗ ಒಬ್ಬ ಯುವಕ ಕವಿ ಒಂದು ಕುಂಜರ ಯೂಧಂಬು ದೋಮ ಕುತ್ತುಕ ಸೊಚ್ಚೆನ್ (ಆನೆಗಳ ಹಿಂಡು ಸೊಳ್ಳೆಯ ಕತ್ತಿನಲ್ಲಿ ಹೊಕ್ಕವು) ಎಂಬ ಸಮಸ್ಯೆಯನ್ನು ಮುಂದಿಟ್ಟ. ಇದು ರಾಮಕೃಷ್ಣನಿಗೆ ಹಿಡಿಸಲಿಲ್ಲ. ಒಡನೆಯೇ ಹೀಗೆಂದ -

	ಗಂಜಾಯಿ ತ್ರಾಗಿ ತುರಕಲ
	ಸಂಜಾತುಲಗೂಡಿ ಕಲ್ಲು ಚವಿಗೊನ್ನಾವಾ !
	ಲಂಜಲಕೊಡುಕಾ ಏಟಿಕಿ
	ಕುಂಜರ ಯೂಧಂಬು ದೋಮ ಕುತ್ತುಕ ಸೊಚ್ಚೆನ್

	(ಗಾಂಜಾ ಸೇದಿ ತುರುಕರೊಂದಿಗೆ ಸೇರಿಕೊಂಡು ಹೆಂಡದ ಸವಿ ಕಂಡಿದ್ದಿಯಾ ? ಸೊಳೆಮಗನೇ, ಆನೆಹಿಂಡು ಸೊಳ್ಳೆ ಕತ್ತಿನೊಳಕ್ಕೆ ಏಕೆ ಹೋಯಿತೋ ? )

	ರಾಮಕೃಷ್ಣನ ಈ ಸಮಸ್ಯಾಪೂರಣ ವಿಧಾನವನ್ನು ನೋಡಿದ ಕೃಷ್ಣದೇವರಾಯನಿಗೆ ಸಿಟ್ಟುಬಂತು. ಆಗ ರಾಯ ರಾಮಕೃಷ್ಣನನ್ನು ಕುರಿತು ನಿನಗೆ ಸಾಮಥ್ರ್ಯವಿದ್ದರೆ ಅರ್ಥಪೂರ್ಣವಾಗಿ ಅದನ್ನು ಪೂರೈಸು ಎಂದಾಗ ರಾಮಕೃಷ್ಣ ಈ ಪದ್ಯವನ್ನು ಹೇಳಿದನಂತೆ -

	ರಂಜನಚೆಡಿ ಪಾಂಡವು ಲರಿ
	ಭಂಜನುಲೈ ವಿರಟು ಗೊಲ್ವ ಬಾಲ್ಪಡಿ ರಕಟಾ
	ಸಂಜಯ ! ಏಮನಿ ಚೆಪ್ಪುದು
	ಕುಂಜರ ಯೂಧಂಬು ದೋಮಕುತ್ತುಕ ಸೊಚ್ಚೆನ್

	(ಅರಿಭಂಜಕರಾದ ಪಾಂಡವರು ದುರದೃಷ್ಟವಶಾತ್, ಗತಿಗೆಟ್ಟು ಸಾಮಾನ್ಯವಾದ ವಿರಾಟನ ಸೇವೆಗೆ ನಿಲಕ್ಲಬೇಕಾಯಿತಲ್ಲವೇ ? ಅಯ್ಯೋ ಸಂಜಯ ! ನಾನು ಏನು ಹೇಳಲಿ, ಆನೆ ಹಿಂಡು ಹೋಗಿ ಸೊಳ್ಳೆಯ ಕತ್ತಿನಲ್ಲಿ ಸೇರಿದಂತಾಯಿತು.)

	ಕವಿಗಳು ಅತಿಶಯೋಕ್ತಿಗಳಿಂದ ಕೂಡಿದ ಅಸ್ವಾಭಾವಿಕವೂ ಅಸಂಭವವೂ ಆದ ಸಂಗತಿಗಳನ್ನೇ ವರ್ಣಿಸುವರೇ ಹೊರತು ಇದ್ದುದನ್ನು ಇದ್ದಹಾಗೆ ವರ್ಣಿಸುವ ಶಕ್ತಿಯೇ ಅವರಿಗಿಲ್ಲವೆಂದು ರಾಜ ತಿರುಮಲರಾಯ ಒಮ್ಮೆ ಆಕ್ಷೇಪಿಸಿದ. ಕೂಡಲೆ ರಾಮಕೃಷ್ಣ ಈ ಪದ್ಯ ಕಟ್ಟಿ ಹೇಳಿದನಂತೆ :

	ಅನ್ನಾತಿಗೂಡ ಹರುಡಗು
	ಅನ್ನಾತಿನಿ ಗೂಡಕುನ್ನ ಅಸುರಗುರುಂಡೌ
	ಅನ್ನಾ ! ತಿರುಮಲರಾಯುಡು
	ಕನ್ನೊಕ್ಕಟಿ ಲೇದುಗಾನಿ ಕಾಮುಡು ಗಾಡೇ !

	(ಹೆಂಡತಿಯ ಜತೆಯಲ್ಲಿದ್ದಾಗ ತಿರುಮಲರಾಯ ಸಾಕ್ಷಾತ್ ಮುಕ್ಕಣ್ಣ ಸತಿಯ ಜತೆಯಲ್ಲಿರದೇ ಒಬ್ಬನೇ ಇದ್ದಾಗ ಶುಕ್ರಾಚಾರ್ಯ. ಅಣ್ಣಾ ! ನಮ್ಮ ತಿರುಮಲರಾಯನಿಗೆ ಒಂದು ಕಣ್ಣಿಲ್ಲವೇ ಹೊರತು - ಕಾಮಣ್ಣನೇ ಅಲ್ಲವೆ !) ರಾಮಕೃಷ್ಣನ ಈ ಸ್ವಭಾವೋಕ್ತಿಯನ್ನು ಕೇಳಿದ ತಿರುಮಲರಾಯ ಅಂದಿನಿಂದ ಕವಿಗಳ ತಂಟೆಗೆ ಹೋಗಲಿಲ್ಲವಂತೆ.

	ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಕವಿಗಳಿಗೆ ಗಂಡಾಂತರಗಳು ಬಂದಾಗ ತೆನಾಲಿ ರಾಮಕೃಷ್ಣನೇ ಪಾರು ಮಾಡುತ್ತಿದ್ದನೆಂದು ಹೇಳುವ ಇನ್ನೂ ಅನೇಕ ಕಥೆಗಳುಂಟು.								(ಕೆ.ಎಸ್.ಯು.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ